ಮಧ್ಯ ಭಾರತದ ಸೋನ್ ನದಿಯು ಗಂಗಾ ನದಿಯ ದಕ್ಷಿಣದ ಉಪನದಿಗಳ ಪೈಕಿ ಅತ್ಯಂತ ದೊಡ್ಡದು. ಸೋನ್ ನದಿಯು ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ಉಗಮ ಸ್ಥಾನಕ್ಕಿಂತ ಸ್ವಲ್ಪ ಪೂರ್ವದಲ್ಲಿ ಉಗಮಿಸಿ ಮಧ್ಯ ಪ್ರದೇಶದಲ್ಲಿ ಉತ್ತರ-ವಾಯವ್ಯ ದಿಕ್ಕಿನಲ್ಲಿ ಹರಿದು ನೈಋತ್ಯ-ಈಶಾನ್ಯ ದಿಕ್ಕಿನಲ್ಲಿ ಸಾಗುವ ಕೆಯ್ಮೂರ್ ಶ್ರೇಣಿಯನ್ನು ಸಂಧಿಸಿದಾಗ ಪೂರ್ವಕ್ಕೆ ತೀಕ್ಷ್ಣವಾಗಿ ತಿರುಗಿ ಹರಿಯುತ್ತದೆ. ಸೋನ್ ನದಿಯು ಕೆಯ್ಮೂರ್ ಶ್ರೇಣಿಗೆ ಸಮಾಂತರವಾಗಿ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿದು ಗಂಗಾ ನದಿಯನ್ನು ಪಟ್ನಾಕ್ಕೆ ಸ್ವಲ್ಪ ಮೇಲೆ ಸೇರುತ್ತದೆ.